ನಾಗೇಶ ಭಟ್ಟ
	1741-1782. ಉತ್ತರಕನ್ನಡ ಜಿಲ್ಲೆಯಲ್ಲಿನ ಹಳದೀಪುರದಲ್ಲಿ ಹುಟ್ಟಿದ ಕರ್ನಾಟಕದ ಒಬ್ಬ ದೊಡ್ಡ ಸಂಸ್ಕøತ ವಿದ್ವಾಂಸ. ಇವನನ್ನು ಮಹಾಬಲ ಭಟ್ಟ ಎಂದೂ ಕರೆಯುತ್ತಿದ್ದರು. ಈತ ಸಾರಸ್ವತ ಬ್ರಾಹ್ಮಣ. ತಂದೆ ವೆಂಕಟೇಶ ಭಟ್ಟ. ತಂದೆಯ ಬಳಿಯಲ್ಲೇ ಓದಿ ಧರ್ಮಶಾಸ್ತ್ರ, ಜ್ಯೋತಿಷ್ಯ, ಯಾಜ್ಞಿಕ ಇತ್ಯಾದಿಗಳಲ್ಲಿ ನಿಷ್ಣಾತನಾದ. ಇವನದು ವೈಷ್ಣವ ಪಂಥ. ಕರ್ನಾಟಕದಲ್ಲಿ ಶ್ರೌತ. ಸ್ಮಾರ್ತಕರ್ಮಗಳ ವಿಷಯಗಳನ್ನು ತಿಳಿದುಕೊಂಡವರಲ್ಲಿ ಈತನಿಗೆ ಅಗ್ರಸ್ಥಾನ. ಇಂದಿಗೂ ಆ ಮರ್ಯಾದೆ ಈತನ ವಂಶಜರಿಗೆ ಸಲ್ಲುತ್ತಿದೆ.

	ಸ್ಮøತ್ಯರ್ಥಮುಕ್ತಾವಲೀ, ತಾಂತ್ರಿಕಮುಕ್ತಾವಲೀ ಮತ್ತು ಆಗಮಗ್ರಂಥ - ಇವು ಮೂರು ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ಈತನ ಗ್ರಂಥಗಳು. ಆರ್ಯಾತಂತ್ರ, ಆರ್ಯಾಕೌತುಕ ಮತ್ತು ಮಹಾಬಲಸಿದ್ಧಾಂತ-ಇವು ಮೂರು ಜ್ಯೋತಿಷ್ಯಶಾಸ್ತ್ರದಲ್ಲಿನ ಗಣಿತ ವಿಷಯಗಳಿಗೆ ಸಂಬಂಧಪಟ್ಟವು. ಇವನ ಸಂಸ್ಕøತ ಶೈಲಿ ಸರಳವೂ ಸುಬೋಧವೂ ಆಗಿವೆ.	
	(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ